ಬಾರ್ಥೊಲಿನಸ್, ಥಾಮಸ್		
1616-80. ಅಂಗರಚನಾ ವಿಜ್ಞಾನಿ. ಡೆನ್ಮಾರ್ಕ್‍ನಲ್ಲಿ ನೆಲಸಿದ್ದ ಪ್ರತಿಭಾವಂತ ಸ್ವೀಡಿಷ್ ವಿಜ್ಞಾನಿಗಳ ಮನೆತನದಲ್ಲಿ 1616 ಅಕ್ಟೋಬರ್ 20ರಂದು ಕೋಪೆನ್‍ಹೇಗನ್ ನಗರದಲ್ಲಿ ಜನಿಸಿ ಪ್ರಾಥಮಿಕ ಮತ್ತು ವೈದ್ಯಕೀಯ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ, ಮುಂದೆ ಒಂಬತ್ತು ವರ್ಷಗಳ ಕಾಲ ಪರ್ಯಂತ ಬೇಸಲ್ ಮತ್ತು ಪಾಡುವ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವೈದ್ಯಕೀಯ ಮತ್ತು ಇತರ ಶಾಸ್ತ್ರಗಳ ವ್ಯಾಸಂಗ ಮುಂದುವರಿಸಿದ. 1646ರಲ್ಲಿ ಗಣಿತ ಹಾಗೂ ಭಾಷಾಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಎರಡು ವರ್ಷಾನಂತರ ಇವನನ್ನು ಕೋಪನ್‍ಹೇಗನ್ನಿನಲ್ಲಿ ದೇಹರಚನಾ ವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಿಸಲಾಯಿತು. ಈ ಕೆಲಸದಲ್ಲಿ ಈತನಿಗೆ ಸಾಕಷ್ಟು ಹುಮ್ಮಸ್ಸು ಇಲ್ಲದಿದ್ದರೂ ದೇಹರಚನೆ ಕುರಿತಂತೆ ಪ್ರಮುಖ ಆವಿಷ್ಕಾರ ಗೈದದ್ದುಂಟು. ಮಾನವನಲ್ಲಿ ತೊರಾಸಿಕ್ ಡಕ್ಟ್ ಎಂಬ ಪ್ರಧಾನ ದುಗ್ಧರಸನಾಳವನ್ನೂ ಇತರ ದುಗ್ಧರಸ ನಾಳಗಳನ್ನೂ ಗುರುತಿಸಿ ದುಗ್ಧರಸವ್ಯೂಹದ ವಿವರಣೆ ನೀಡಿದ (1652-54). ಪಾಶ್ಚಾತ್ಯ ವೈದ್ಯದಲ್ಲಿ ಇವಕ್ಕೆ ಈಗ ಪ್ರಚಲಿತವಾಗಿರುವ ಲಿಂಫಾಟಿಕ್ ಎಂಬ ಪದವನ್ನು ಸೃಷ್ಟಿಸಿದಾತ ಇವನೇ. ಯಕೃತ್ತು ರಕ್ತದ ನಿರಂತರ ಉತ್ಪಾದನ ಸ್ಥಳವೆಂದು ಆ ಕಾಲದ ತನಕವೂ ಪ್ರಚಲಿತವಾಗಿದ್ದ ಅಭಿಪ್ರಾಯ ಶುದ್ಧಾಂಗ ತಪ್ಪು ಎಂಬುದಾಗಿ ಸಾರಿದವನೂ ಇವನೇ. ಅರಿಸ್ಟಾಟಲ್, ಗೇಲೆನ್ ಮುಂತಾದ ಪ್ರಾಚೀನ ವೈದ್ಯ ವಿಜ್ಞಾನಿಗಳ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ 1626ರಲ್ಲಿ ಇಂಗ್ಲೆಂಡಿನ ವಿಲಿಯಮ್ ಹಾರ್ವೆ ಪ್ರತಿಪಾದಿಸಿದ ಹೃದಯ ಮಿಡಿತ ಮತ್ತು ರಕ್ತಪರಿಚಲನಾ ಕ್ರಮದ ನೂತನ ಸಿದ್ಧಾಂತವನ್ನು ಬಲವಾಗಿ ಅನುಮೋದಿಸಿದವರಲ್ಲಿ ಬಾರ್ಥೊಲಿನಸ್ ಒಬ್ಬ. 1650-53ರ ಅವಧಿಯಲ್ಲಿ ಸ್ವೀಡನ್ನಿನ ಉಪ್ಸಲ ವಿಶ್ವವಿದ್ಯಾಲಯದ ಓಲ್‍ರುಡ್‍ಬ್ಲಿಕ್ ಎಂಬ ವಿಜ್ಞಾನಿಯೂ ದುಗ್ಧರಸವ್ಯೂಹ ಗುರುತಿಸಿ ವಿವರಿಸಿದ್ದರಿಂದ ಪ್ರಥಮ ಆವಿಷ್ಕಾರದ ಗೌರವ ಈ ಇಬ್ಬರ ಪೈಕಿ ಯಾರಿಗೆ ಸಲ್ಲಬೇಕು ಎಂಬುದು ದೀರ್ಘ ಹಾಗೂ ಕಟುವಿವಾದದ ವಿಷಯವಾಯಿತು. ಮೊದಲಿನಿಂದಲೇ ಹುದ್ದೆಯಲ್ಲಿ ಆಸಕ್ತಿ ಕಡಿಮೆ ಇದ್ದ ಬಾರ್ಥೊಲಿನಸ್ ಇದರಿಂದ ಬೇಸತ್ತು ಉದ್ಯೋಗ ತ್ಯಜಿಸಿ ತನ್ನ ಗ್ರಾಮಕ್ಕೆ ಹೋಗಿ ನೆಲಸಿದ(1661). ಅಲ್ಲಿ ಆಸ್ತಿ ರೂಢಿಸುತ್ತ ಮತ್ತು ಅಧ್ಯಯನ ಮುಂದುವರಿಸುತ್ತ ಇದ್ದಾಗ 1670ರಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಅವನ ಮನೆಯೂ ಅಮೂಲ್ಯವಾದ ಅಪ್ರಕಟಿತ ವ್ಯಾಸಂಗ ಲೇಖನಗಳೂ ನಾಶವಾಗಿಹೋದುವು. ನಿರ್ಗತಿಕವಾಗಿಹೋದ ಈ ಗೌರವಾನ್ವಿತ ವಿಜ್ಞಾನಿಯ ಮೇಲೆ ಕನಿಕರಗೊಂಡು ದೊರೆ ಐದನೆಯ ಕ್ರಿಶ್ಚಿಯನ್‍ಸನ್ ಇವನನ್ನು ಕೋಪನ್‍ಹೇಗನ್ ವಿಶ್ವವಿದ್ಯಾಲಯದ ಗ್ರಂಥಪಾಲಕನಾಗಿಯೂ ಒಂದಿಗೇ ತನ್ನ ಖಾಸಗಿ ವೈದ್ಯನಾಗಿಯೂ ನೇಮಿಸಿಕೊಂಡ. 1680 ಡಿಸೆಂಬರ್ 4 ರಂದು ಮೃತನಾದ.							(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ